ರಾಮಯ್ಯಪಿಳ್ಳೆ, ವಳವೂರ್
 	1910-? ದಕ್ಷಿಣ ಭಾರತದ ಪ್ರಸಿದ್ಧ ನಾಟ್ಯಾಚಾರ್ಯ. 1910 ಡಿಸೆಂಬರ್ 2 ರಂದು ತಂಜಾವೂರಿಗೆ ಸಮೀಪದ ಪುರಾತನ ಪುಣ್ಯಕ್ಷೇತ್ರವಾದ ವಳವೂರ್ ಗ್ರಾಮದಲ್ಲಿ ಜನಿಸಿದರು. ತಂದೆ ಪಾರ್ಥಿಬನ್, ತಾಯಿ ಭಾಗ್ಯಮ್ಮ. ಚಿಕ್ಕಂದಿನಲ್ಲಿಯೇ ಇವರಿಗೆ ಪಿತೃ ವಿಯೋಗವಾಯಿತು. ವಳವೂರಿಗೆ ಹತ್ತಿರವಿರುವ ಮಾಯಾದರದಲ್ಲಿ ಸೋದರಮಾವನ ಪೋಷಣೆಯಲ್ಲಿ ಬೆಳೆದರು. ಸೋದರಮಾವ ಮಾಣೀಕ್ಯ ನಟ್ಟುವನಾರ್ ಪ್ರತಿಭಾಶಾಲಿಗಳಾದ ನಾಟ್ಯಾಚಾರ್ಯ. ಇವರು ರಾಮಯ್ಯಪಿಳ್ಳೆಯವರಿಗೆ ನೃತ್ತ-ನೃತ್ಯ, ಅಭಿನಯ-ನಟುವಾಂಗ ಮೊದಲಾದವುಗಳಲ್ಲಿ ಉನ್ನತ ಶಿಕ್ಷಣ ನೀಡಿದರು. ಸಾಕಷ್ಟು ವಿದ್ಯಾರ್ಜನೆಯಾದ ಅನಂತರ 1938 ರಲ್ಲಿ ಮದರಾಸಿಗೆ ಬಂದು ನೆಲೆಸಿದರು. ಅಂದಿನಿಂದ ಇವರ ನಾಟ್ಯಕಲಾ ಸೇವೆ ಅವಿರತವಾಗಿ ನಡೆಯುತ್ತ ಬಂದಿದೆ. ಕ್ಲಿಷ್ಟವಾದ ವಳವೂರ್ ಶೈಲಿಯನ್ನು ವೈಶಿಷ್ಟ್ಯಪೂರ್ಣವಾಗಿ ಪರಿವರ್ತಿಸಿ ಪ್ರಪಂಚದ ಖ್ಯಾತಿಯನ್ನು ಪಡೆದ ನೃತ್ಯಪಟುಗಳನ್ನು ತಯಾರು ಮಾಡಿದ್ದಾರೆ. ಚಿತ್ರಾ, ವಿಶ್ವೇಶ್ವರನ್, ರಾಧಾ, ಯಾಮಿನಿ ಕೃಷ್ಣಮೂರ್ತಿ ಮೊದಲಾದ ಪ್ರಸಿದ್ಧ ನೃತ್ಯ ಕಲಾವಿದೆಯರು ಇವರ ಶಿಷ್ಯವರ್ಗಕ್ಕೆ ಸೇರಿದವರು.

  	ರಾಮಯ್ಯಪಿಳ್ಳೆಯವರು ಉತ್ತಮ ನಾಟ್ಯಾಚಾರ್ಯರಾಗಿ ದೇಶ ವಿದೇಶಗಳಲ್ಲಿ ಅಸಂಖ್ಯಾತ ನೃತ್ಯ ಕಛೇರಿಗಳನ್ನು ನಡೆಸಿದ್ದಾರೆ. ತಮಿಳಿನ ಪ್ರಸಿದ್ಧ ಕವಿ ಸುಬ್ರಹ್ಮಣ್ಯ ಭಾರತಿಯವರ ರಾಷ್ಟ್ರಭಕ್ತಿಗೀತೆ ಆಡುವೋಮೇ ರಚನೆಗೆ ನೃತ್ಯ ಸಂಯೋಜನೆ ಮಾಡಿ ಜನಪ್ರಿಯತೆಯನ್ನು ಗಳಿಸಿದರು. ಇವರ ಕಲಾಸೇವೆಗೆ ಬಗೆಬಗೆಯ ಗೌರವಗಳು ಲಭಿಸಿವೆ. 1966 ರಲ್ಲಿ ಇವರಿಗೆ ಸಂಗೀತ ನಾಟಕ ಅಕೆಡಮಿಯ ಪ್ರಶಸ್ತಿ ಬಂತು. 961 ರಲ್ಲಿ ತಮಿಳ್‍ಇಶೈ ಸಂಘದ ವತಿಯಿಂದ ಇಶೈಪೇರರಿಙ್ಞರ್ ಎಂಬ ಬಿರುದು ಬಂತು. ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

  	ಕೇಂದ್ರ ಸಂಗಿತ ನಾಟಕ ಅಕಾಡೆಮಿ, ತಮಿಳುನಾಡು ಇಯಲ್ ಇಶೈ ನಾಟಕ ಮನ್ರಂ ಮೊದಲಾದ ವಿದ್ವತ್ ಸಭೆಗಳ ಕಾರ್ಯಚಾರಿ ಸಮಿತಿಗಳಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಇವರು ಕಾರ್ಯನಿರ್ವಹಿಸಿದ್ದಾರೆ.			   
  
(ಎಂ.ವಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ